ಬ್ರೌನಿಯನ್ ಚಲನೆ
ತರಲದಲ್ಲಿ ತೇಲುವ ಕಿರಿಕಣಗಳ ಯಾದೃಚ್ಛಿಕ ಅನಿಯತ ಚಲನೆ (ಬ್ರೌನಿಯನ್ ಮೂವ್‍ಮೆಂಟ್). ಸ್ಕಾಟ್ಲೆಂಡಿನ ಸಸ್ಯವಿಜ್ಞಾನಿ ರಾಬರ್ಟ್ ಬ್ರೌನ್ (1773-1858) ತನ್ನ ಬಹುಮುಖ ಸಂಶೋಧನೆಗಳ ವೇಳೆ ತುಸು ವಿಚಿತ್ರವೂ ನವನವೀನವೂ ಆದ ಒಂದು ವಿದ್ಯಮಾನ ಗುರುತಿಸಿದ. ನೀರಿನಲ್ಲಿ ತೇಲಿಬಿಟ್ಟಿದ್ದ ಪರಾಗರೇಣುವಿನ ವರ್ತನೆಯನ್ನು ಆತ ಸೂಕ್ಷ್ಮದರ್ಶಕದ ಮೂಲಕ ಅವಲೋಕಿಸುತ್ತಿದ್ದ (1827). ಜಲ ಪೂರ್ತಿ ನಿಶ್ಚಲವಾಗಿತ್ತು. ಅದರ ಮೇಲೆ ಸೂಕ್ಷ್ಮವಾಯುಕಂಪನದ ಪ್ರಭಾವ ಕೂಡ ಇರಲಿಲ್ಲ ಇತರ ಯಾವ ಬಲಗಳಿಗೂ ಅಲ್ಲಿ ಅವಕಾಶ ನಾಸ್ತಿ. ಹಾಗಿದ್ದರೂ ರೇಣು ಮಾತ್ರ ಸ್ಥಗಿತವಾಗಿರಲಿಲ್ಲ-ಎಡ್ಡ ತಿಡ್ಡ ಬೇಕಾಬಿಟ್ಟಿ ಕುಣಿತ ನೆಗೆತಗಳಿಂದ ಬಾಧಿತವಾಗಿತ್ತು. ಇದರ ಕಾರಣ ಅರಸಲೋಸ್ಕರ್ ಬ್ರೌನ್ ಈ ಸೂಕ್ಷ್ಮ ವೀಕ್ಷಣೆಯನ್ನು ಇನ್ನಷ್ಟು ಪರಿಷ್ಕøತ ಹಾಗೂ ಅದರ್ಶ ಸನ್ನಿವೇಶದಲ್ಲಿ ಪುನರಾವರ್ತಿಸಿದ. ಆದರೆ ರೇಣುವಿನ ಹುಚ್ಚಾಬಟ್ಟೆ ರಿಂಗಣದಲ್ಲಿ ವ್ಯತ್ಯಾಸ ಕಂಡುಬರಲಿಲ್ಲ. ಅದರ ಜಾಡುಗಳಲ್ಲಿ ಯಾವ ಕ್ರಮವೂ ಇರಲಿಲ್ಲ. ಅವು ಬೇಕಾಬಿಟ್ಟಿ ಎಳೆದ ಸರಳರೇಖೆಗಳು. ನೀರನ್ನು ಹಿಡಿದಿಟ್ಟಿದ್ದ ಜಾಡಿಯ ಗೋಡೆಗಳಿಂದ ಮತ್ತು ನೀರಿನ ಮುಕ್ತ ಮೇಲ್ಮೈಯಿಂದ ಮಾತ್ರ ಸೀಮಿತವಾದಂಥವು. ರೇಣುವಿನಲ್ಲಿ ಹುದುಗಿದ್ದ ಅವ್ಯಕ್ತ ಜೀವದ ಕಾರಣವಾಗಿ ಅದು ನಿರ್ಜೀವ ನಿಶ್ಚಲ ಜಲದಲ್ಲಿ ಚಲಿಸುತ್ತದೆಂದು ಬ್ರೌನ್ ತೀರ್ಮಾನಿಸಿದ. ಅರ್ಥಾತ್ ರೇಣು ನೀರಿನಲ್ಲಿ ಸ್ವೇಚ್ಛೆಯಂತೆ ಸರಿದಾಡುವ ಪುಟ್ಟ ಜೀವಿ! ಇದು ನಿಜವಾದ ಪಕ್ಷ ರೇಣುಗಾತ್ರದ ನಿರ್ಜೀವ ವಸ್ತುವೊಂದನ್ನು ನೀರಿನಲ್ಲಿ ತೇಲಿಬಿಟ್ಟಾಗ ಅದು ಪೂರ್ಣ ಸ್ಥಿರವಾಗಿರಬೇಕಷ್ಟೆ. ನೀರಿನಲ್ಲಿ ವಿಲೀನವಾಗದ ರಂಗಿನ ಸೂಕ್ಷ್ಮಕಣ ಬಳಸಿ ಅದರ ವರ್ತನೆಯನ್ನು ಬ್ರೌನ್ ಅವಲೋಕಿಸಿದ. ಈ ನಿರ್ಜೀವ ವಸ್ತು ಕೂಡ ಜೀವಿಸಹಜ ನರ್ತನವನ್ನು ಅಷ್ಟೇ ಲಗುಬಗೆಯಿಂದ ಪ್ರದರ್ಶಿಸುತ್ತಿತ್ತು. ಅಲ್ಲಿಗೆ ಜೀವಿ ಅಜೀವಿ ಎಂಬ ಭೇದಭಾವವಿಲ್ಲದ ಯಾದೃಚ್ಛಿಕ ಚಲನೆ ಇದೆಂದಾಯಿತು. ಈ ವಿಶೇಷ ವಿದ್ಯಮಾನಕ್ಕೆ ಬ್ರೌನಿಯನ್ ಚಲನೆ ಎಂಬ ಹೆಸರು ರೂಢಿಗೆ ಬಂದಿತು.

	ಬೌನ್ರಿಯನ್ ಚಲನೆಯ ವೇಗ ಹಾಗೂ ಯಾದೃಚ್ಛಿಕತೆಯೊಂದಿಗೆ (ರ್ಯಾಂಡಮ್‍ನೆಸ್) ಮಾಧ್ಯಮದ (ಉದಾಹರಣೆಗೆ ನೀರು) ಉಷ್ಣತೆ ಏರುವುದೆಂದು ಪ್ರಯೋಗಗಳು ಸ್ಪಷ್ಟಪಡಿಸಿದುವು. ಆ ದಿನಗಳಲ್ಲಿ ಉಷ್ಣದ ಶಕ್ತಿಸ್ವರೂಪ ಇನ್ನೂ ಸ್ಪಷ್ಟವಾಗಿರಲಿಲ್ಲ. ಇದೊಂದು ತರಲ (ಫ್ಲೂಯಿಡ್), ಇದು ಮಾಧ್ಯಮದ ಜೊತೆ ಬೆರೆತಾಗ ಅದರ ಉಷ್ಣತೆ ಏರುವುದೆಂದು ಭಾವಿಸಲಾಗಿತ್ತು, ಆದರೆ ಈ ದಿಶೆಯಲ್ಲಿ ಸ್ವತಂತ್ರವಾಗಿ ಮೂಲಭೂತ ಚಿಂತನೆ ನಡೆಸಿದ ಕ್ಲರ್ಕ್ ಮ್ಯಾಕ್ಸ್ ವೆಲ್ (1831-79) ಮತ್ತು ಲಡ್ ವಿಗ್ ಎಡ್ವರ್ಡ್ ಬೋಲ್ಟ್ಸ್‍ಮನ್ (1844-1906) ಇವರಿಬ್ಬರ ಹೆಸರುಗಳಿಂದ ಪ್ರಸಿದ್ಧವಾಗಿರುವ ಅನಿಲಗಳ ಚಲನ ಸಿದ್ಧಾಂತದ ಪ್ರಕಾರ ಅನಿಲವೆಂಬುದು ಅಣುಗಳ ಸಮುಚ್ಚಯ, ಇವು ನಿರಂತರ ಯಾದೃಚ್ಛಿಕ ಚಲನೆಯಲ್ಲಿರುತ್ತವೆ. ಬಿಡಿ ಅಣುವಿನ ಚಲನದಿಶೆಯನ್ನಾಗಲಿ ವೇಗವನ್ನಾಗಲಿ ಪ್ರತ್ಯೇಕವಾಗಿ ಗಣಿಸಿ ಹೇಳಲಾಗದಿದ್ದರೂ ಒಟ್ಟಾರೆ ಅನಿಲರಾಶಿಯಲ್ಲಿ ಅಣುಗಳ ಸರಾಸರಿ ವೇಗವನ್ನು ಗಣಿಸಿ ಹೇಳುವುದು ಸಾಧ್ಯ. ಈ ಸರಾಸರಿ ವೇಗವನ್ನು ಅವಲಂಬಿಸಿ ಅನಿಲರಾಶಿಯ ಚಲನಶಕ್ತಿ ಇದೆ, ಮತ್ತು ಇದೇ ಅದರ ಉಷ್ಣತೆಯ ಮಾನಕ ಎಂದು ತಿಳಿದುಬಂತು.

	ಅನಿಲರಾಶಿಯ ಸಮಗ್ರ ಚಲನಶಕ್ತಿ ಅದರ ಉಷ್ಣತೆಯ ಮಾನಕ ಎಂಬ ಈ ಸ್ವಾರಸ್ಯಕರ ಪರಿಕಲ್ಪನೆ ಮತ್ತು ಇದನ್ನು ಆಧರಿಸಿ ಮಾಡಿದ ಗಣಿತಗಣನೆ ಭೌತವಿಜ್ಞಾನದಲ್ಲಿ ಪ್ರಚಲಿತವಾಗಿದ್ದ ಹಲವು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿದುವು. (ಎಂ.ಎಸ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ